ಕೆಳತಿ ಮೀನು	

ಭಾರತ, ಪಾಕಿಸ್ತಾನ, ಬರ್ಮ, ಶ್ರೀಲಂಕ, ಸಯಾಂ ಮತ್ತು ಥೈಲ್ಯಾಂಡ್ ದೇಶಗಳಲ್ಲಿನ ನಿಂತಿರುವ ಹಾಗೂ ಹರಿಯುವ ಸಿಹಿನೀರಿನಲ್ಲಿ ವಾಸಿಸುವ ಮೀನು. ಶಾಸ್ತ್ರೀಯ ಹೆಸರು ಮಿಸ್ಟಸ್ ಅಥವಾ ಮ್ಯಾಕ್ರೊನಸ್ ವಿಟೇಟಸ್. ಕುಟುಂಬ ಬಾಗ್ರಿಡೀ. ಸಣ್ಣ ಗಾತ್ರದ ಈ ಮೀನು 7" ಳಿಂದ 8" ವರೆಗೆ ಬೆಳೆಯುತ್ತದೆ. ಇದರ ತಲೆಯ ಮೇಲೆ ಕಣ್ಣುಗೂಡಿನ ಹಿಂಭಾಗದಿಂದ ಹಿಡಿದು ದೇಹದ ಮಧ್ಯಭಾಗದವರೆಗೂ ವಿಸ್ತರಿಸಿರುವ ಒಂದು ಉದ್ದ ಗೆರೆಯಿದೆ. ತಲೆಯ ಹಿಂಭಾಗದಲ್ಲಿ ಉದ್ದವಾದ ಹಾಗೂ ಒರಟಾದ ಹೆಡತಲೆ ರಚನೆಯಿದೆ. ಅನೇಕ ವೇಳೆ ಈ ರಚನೆ ಬೆನ್ನಿನ ಕೆಳಗಿನ ಮೂಳೆಯಿಂದ ಚಿಕ್ಕ ಅಂತರದಿಂದ ಬೇರ್ಪಟ್ಟಿದೆ. ಕೆಳತಿ ಮೀನಿನ ಬಾಯಿ ಸುತ್ತ ಎಂಟು ಸ್ಪರ್ಶಾಂಗಗಳಿವೆ (ಬಾರ್ಬೆಲ್ಸ್). ಮೇಲು ದವಡೆಯ ಸ್ಪರ್ಶಾಂಗಗಳು ಹಿಂದಕ್ಕೆ ಬಾಗಿದಾಗ ನಡುವಿನ ಈಜುರೆಕ್ಕೆಗಳವರೆಗೂ ವಿಸ್ತøತವಾಗುತ್ತವೆ. ಕೆಳತಿ ಮೀನಿನ ಸಂತಾನೋತ್ಪತ್ತಿಯ ಶ್ರಾಯ ಮಳೆಗಾಲ (ಜೂನ್-ಸೆಪ್ಟೆಂಬರ್).

ಕೆಳತಿ ಮೀನಿನ ದೇಹದ ಬಣ್ಣ ನವಿರಾದ ಬೂದಿಮಿಶ್ರಿತ ಬಿಳಿಯ ಬಣ್ಣದಿಂದ ಹಿಡಿದು ಹೊಳೆಯುವ ಚಿನ್ನದ ಬಣ್ಣದವರೆಗೂ ವಿವಿಧ ರೀತಿಯದಾಗಿದೆ. ಈ ಬಣ್ಣಗಳ ಹಿನ್ನೆಲೆಯಲ್ಲಿ ಹಲವಾರು, ಸೊಗಸಾದ, ತಿಳಿ ನೀಲಿ ಅಥವಾ ಕಡು ಕಂದು ಬಣ್ಣದಿಂದ ಹಿಡಿದು ಅತಿ ಕಪ್ಪಗಿರುವ ಉದ್ದುದ್ದವಾಗಿ ಹರಡಿರುವ ಪಟ್ಟೆಗಳು ಕಂಡುಬರುತ್ತವೆ. ಈ ಪಟ್ಟೆಗಳ ಸಂಖ್ಯೆ ಮೀನುಗಳ ಆರೋಗ್ಯಸ್ಥಿತಿ ಮತ್ತು ಮೀನುಗಳು ವಾಸಿಸುವ ಸ್ಥಳಗಳಿಗನುಗುಣವಾಗಿ ಮಾರ್ಪಟ್ಟಿರುತ್ತದೆ. ಜಲವಾಸಿ ಕ್ರಿಮಿಕೀಟಗಳು, ಕೆಳತಿ ಮೀನಿನ ಆಹಾರ.  													
(ಬಿ.ಎಚ್.ಎಂ.)